ಚನ್ನಕೇಶವ ಅಯ್ಯಂಗಾರ್, ಎಚ್

1880-1959. ಕನ್ನಡ ಭಾಷಾಸಾಹಿತ್ಯಗಳನ್ನು ರೂಢಿಸಿದ ಹಳಬರಲ್ಲಿ ಒಬ್ಬರು. ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು ಗ್ರಾಮದಲ್ಲಿ ಹುಟ್ಟಿದರು. ಎಂ.ಒ.ಎಲ್. ಪದವಿಯನ್ನು ಪಡೆದ ಕನ್ನಡಿಗರಲ್ಲಿ ಇವರೇ ಮೊದಲಿಗರು. ಮೈಸೂರು ಅಧ್ಯಾಪಕರ ಶಿಕ್ಷಣ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆಮೇಲೆ ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ದುಡಿದರು. ತದನಂತರ ಮದ್ರಾಸು ವಿಶ್ವವಿದ್ಯಾಲಯದ ಓರಿಯಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟಿನ ಕನ್ನಡ ವಿಭಾಗದ ಪ್ರಧಾನ ಅಧ್ಯಾಪಕರಾಗಿ 1936ರಿಂದ 1939ರ ವರೆಗೆ ಸೇವೆ ಸಲ್ಲಿಸಿದರು. ಇವರು ಮುಂಬೈ, ಮದ್ರಾಸು ವಿಶ್ವವಿದ್ಯಾಲಯಗಳ ಸೆನಟ್ ಸದಸ್ಯರೂ ಕನ್ನಡ ಬೋರ್ಡ್ ಆಫ್ ಸ್ಟಡೀಸಿನ ಸದಸ್ಯರೂ ಆಗಿದ್ದರು.

ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿಯೂ (1915-33) ಪರಿಷತ್ತಿನ ಸಾಹಿತ್ಯ ವಿಭಾಗದ ಕಾರ್ಯದರ್ಶಿಯಾಗಿಯೂ (1917-19) ಕೆಲಕಾಲ ಪರಿಷತ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಇವರು ಕನ್ನಡ ನುಡಿಗನ್ನಡಿ, ವಿಕಟಪ್ರತಾಪ ಮತ್ತು ಅರ್ಥಸಾಧಕ ಪತ್ರಿಕೆಗಳ ಸಂಪಾದಕರಾಗಿದ್ದರು.

ಕಳೆದ ತಲೆಮಾರಿನ ಪ್ರಸಿದ್ಧ ವಿದ್ವಾಂಸರಾದ ಬಿ.ಎಂ. ಶ್ರೀಕಂಠಯ್ಯ, ರಾವ್ ಬಹಾದೂರ್ ಆರ್. ನರಸಿಂಹಾಚಾರ್, ಕರ್ನಾಟಕ ಕಲಾನಿಧಿ ಸಂಪಾದಕ ಎಂ.ಎ. ರಾಮಾನುಜ ಅಯ್ಯಂಗಾರ್, ಎಸ್. ಜಿ. ನರಸಿಂಹಾಚಾರ್ ಇವರೆಲ್ಲ ಚನ್ನಕೇಶವ ಅಯ್ಯಂಗಾರ್ಯರ ಸಮಕಾಲೀನರು, ಸಹೋದ್ಯೋಗಿಗಳು, ಸುಪ್ರಸಿದ್ಧ ಕವಿ ನಂದಳಿಕೆ ಲಕ್ಷ್ಮಿನಾರಣಪ್ಪನವರನ್ನು ಚೆನ್ನಾಗಿ ತಿಳಿದಿದ್ದು ಅವರೊಡನೆ ಪತ್ರ ವ್ಯವಹಾರ ನಡೆಸಿದ ಕೆಲವೇ ಹಿರಿಯರಲ್ಲಿ ಇವರೊಬ್ಬರು. ನಂದಳಿಕೆಯವರ ಅದ್ಭುತ ರಾಮಾಯಣದ ಮೂಲಪ್ರತಿಯ ಫೋಟೋಸ್ಟ್ಯಾಟ್ ಪ್ರತಿ ಇವರಲ್ಲಿತ್ತು. ಮಾತ್ರವಲ್ಲದೆ ಇವರಲ್ಲಿ ಇತರ ಅಪೂರ್ವ ಗ್ರಂಥಸಂಗ್ರಹವೂ ಇತ್ತು ಎಂದು ತಿಳಿದುಬಂದಿದೆ

ಇವರು ಕನ್ನಡ ಸಾಹಿತ್ಯ ವಿಷಯವನ್ನು ಕುರಿತು ಬರೆದ ಲೇಖನಗಳು ಆನಲ್ಸ್ ಆಫ್ ಓರಿಯಂಟಲ್ ರಿಸರ್ಚ್ ಪತ್ರಿಕೆಯಲ್ಲಿ ಅಚ್ಚಾಗಿದೆ.

ತಮಗಿಂತ ಹಿಂದೆ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಧಾನ ಅಧ್ಯಾಪಕರಾಗಿದ್ದ ಅಲೆಮನೆ ವೆಂಕಟರಾಯರು ಮತ್ತು ತಮ್ಮ ಸಹೋದ್ಯೋಗಿ ಎಚ್. ಶೇಷ ಅಯ್ಯಂಗಾರರು ಸಂಪಾದಿಸಿದ ಶಬ್ದಮಣಿದರ್ಪಣದ ಕೊನೆಯ ಅನುಬಂಧಗಳನ್ನು ಇವರು ಪರಿಶೀಲಿಸಿ, ಪರಿಷ್ಕರಿಸಿ, ತಮ್ಮದೇ ಒಂದು ಹೊಸ ಅನುಬಂಧವನ್ನು ಕೊಟ್ಟು, ಪ್ರಕಾಶಪಡಿಸಿದ್ದಾರೆ (1938). ಶಬ್ದಮಣಿದರ್ಪಣದ ಅವತರಣಿಕೆಯನ್ನು ಪರಿಶೀಲಿಸಿ, ಹೆಚ್ಚಿನ ವಿವರಗಳನ್ನು ಸೇರಿಸಿ, ಪರಿಷ್ಕರಿಸಿ, ಅದರ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
(ಎ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ